ವ್ಯಾಸರಾಯ ಬಲ್ಲಾಳ
	(1923-2008) ಆಧುನಿಕ ಕನ್ನಡದ ಗದ್ಯಲೇಖಕರಲ್ಲಿ ಒಬ್ಬರು; ಸಣ್ಣಕಥೆಗಾರರು, ಕಾದಂಬರಿಕಾರರು. ಇವರು ಉಡುಪಿ ಜಿಲ್ಲೆಯ ನಿಡಂಬೂರಿನಲ್ಲಿ 1923 ಡಿಸೆಂಬರ್ 1ರಂದು ಜನಿಸಿದರು. ತಂದೆ ನಿಡಂಬೂರು ರಾಮದಾಸ ಬಲ್ಲಾಳ ತಾಯಿ ಕಲ್ಯಾಣಿ. ರಾಮದಾಸ ಬಲ್ಲಾಳರು ಕನ್ನಡ ಹಾಗೂ ಸಂಸ್ಕøತ ವಿದ್ವಾಂಸರು. ಇವರು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣಗಳನ್ನು ಉಡುಪಿಯಲ್ಲಿ ಪಡೆದರು. ಮೆಟ್ರಿಕ್ ಮುಗಿಸಿದ ಇವರು ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೋರ್ಡು ಕಚೇರಿಯಲ್ಲಿ ದುಡಿದರು. ಅನಂತರ  ಉದ್ಯೋಗವನ್ನರಿಸಿ ಮುಂಬಯಿಗೆ ಹೋದರು(1944). ಅಲ್ಲಿ ವಿದೇಶಿ ತೈಲ ಸಂಸ್ಥೆಯೊಂದನ್ನು ಸೇರಿದ ಇವರು ನಲವತ್ತು ವರ್ಷಗಳ ದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು(1984). ಈಗ ಮುಂಬಯಿಯಲ್ಲಿ ವಾಸವಾಗಿದ್ದಾರೆ. 

	ಮುಂಬಯಿಯ ಅನೇಕ ಸಾಹಿತ್ಯಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಇವರು ಆಸಕ್ತಿಯಿಂದ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬಯಿ ಶಾಖೆಯ ಅಧ್ಯಕ್ಷರಾಗಿ(1981), ಮುಂಬಯಿಯಲ್ಲಿ ಜರುಗಿದ ಕನ್ನಡಿಗರ ಸಮ್ಮೇಳನದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 

	ಇವರು ಬರೆದಿರುವ ಕೃತಿಗಳ ಸಂಖ್ಯೆ ಕಡಮೆ, ಸತ್ತ್ವದ ದೃಷ್ಟಿಯಿಂದ ಗಟ್ಟಿ ಕೃತಿಗಳಾಗಿವೆ. ಅನುರಕ್ತೆ (1953), ಹೇಮಂತಗಾನ (1954), ವಾತ್ಸಲ್ಯಪಥ (1957), ಉತ್ತರಾಯಣ (1969), ಹಾಗೂ ಬಂಡಾಯ (1986), ಆಕಾಶಕ್ಕೊಂದು ಕಂದೀಲು (1995), ಹೆಜ್ಜೆ (2000) ಎಂಬ ಕಾದಂಬರಿಗಳನ್ನೂ ಬದುಕಿನ ಆದರ್ಶ (1950), ಕಾಡು ಮಲ್ಲಿಗೆ (1957), ಸಂಪಿಗೆ ಹೂ (1958), ಮಂಜರಿ (1975), ಮಿಳ್ಳಿ ರಾಮಾಯಣ, ಕಥಾಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಮಂಜರಿ ಇವರ ಸಮಗ್ರ ಕಥೆಗಳನ್ನು ಒಳಗೊಂಡ ಕೃತಿ. ಸಂಗ್ರಹ ಭಾರತಾಯಣ (1984) ಎಂಬ ರಾಜಕೀಯ ವಿಡಂಬನೆಯ ಕೃತಿಯೊಂದನ್ನು ಹೊರತಂದಿದ್ದಾರೆ. 

	ಅನುರಕ್ತೆ ಇವರ ಪ್ರಥಮ ಕಾದಂಬರಿ. ಸುಮಿತ್ರೆ ಎಂಬ ಹೆಣ್ಣಿನ ಹೋರಾಟದ ಬದುಕಿನ ಚಿತ್ರಣವನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಸಂಸಾರದಲ್ಲಿ ಕಹಿಯನ್ನು ಸಹಿಸುತ್ತ, ಸಿಹಿಯನ್ನು ಬಯಸುವ ಭಾರತಿ ಸಮಾಜೋದ್ಧಾರಕ ಕನಸುಹೊತ್ತ ಆದರ್ಶಯುವಕ ಅನಂತ ಹಾಗೂ ಸಂಸಾರ ಸುಖದಿಂದ ವಂಚಿತಳಾದರೂ ನಾಡಿನ ಒಳಿತಿಗಾಗಿ ಕ್ರಿಯಾತ್ಮಕಳಾಗಿರುವ ಇಂದಿರೆ-ಈ ಮೂವರ ಆಂತರಿಕ ಹಾಗೂ ಬಾಹ್ಯ ಬದುಕನ್ನು ಚಿತ್ರಿಸುವ ಕಾದಂಬರಿ ಹೇಮಂತಗಾನ. ಇಲ್ಲಿ ಕಥೆಹೇಳುವ ರೀತಿಯಲ್ಲಿ ನವೀನತೆ ಇದೆ. ವಾತ್ಸಲ್ಯಪಥ ಸುಶಿಕ್ಷಿತ ಮಧ್ಯಮ ವರ್ಗದ ಕುಟುಂಬಗಳ ಸುಖ-ದುಃಖಗಳನ್ನು ಸರಳವಾಗಿ ನಿರೂಪಿಸುವ ಕೃತಿ. ಉತ್ತರಾಯಣ ಇವರ ನಾಲ್ಕನೆಯ ಕಾದಂಬರಿ. ಇದು ಮುಖ್ಯವಾಗಿ ಅಕ್ಕ ತಂಗಿಯರಿಬ್ಬರ ನೋವಿನಕಥೆ. ಇಬ್ಬರೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಾರೆ. ಇವರ ಸುತ್ತ ಸುಳಿಯುವ ಹತ್ತಾರು ಜನರ ಬಾಳು, ಮಾನಸಿಕ ಘರ್ಷಣೆ ಒಬ್ಬರ ಬದುಕು ಮತ್ತೊಬ್ಬರ ಮೇಲೆ ಬೀರುವ ವಿಚಿತ್ರ ಪರಿಣಾಮಗಳ ಸಂಕೀರ್ಣ ಚಿತ್ರಣ ಇದರಲ್ಲಿದೆ.

	ಇವರು ತಮ್ಮ ಕಾದಂಬರಿಗಳಿಗೆ ಮಹಾನಗರ ಮುಂಬಯಿಯನ್ನೇ ಆವರಣವನ್ನಾಗಿರಿಸಿಕೊಂಡಿದ್ದಾರೆ. ಅನುರಕ್ತೆ, ವಾತ್ಸಲ್ಯಪಥ ಕಾದಂಬರಿಗ ಳಲ್ಲಿ ವ್ಯಕ್ತಿ ಸಂಬಂಧಗಳು ಮುಖ್ಯವಾಗಿದ್ದರೆ ಹೇಮಂತಗಾನ, ಉತ್ತರಾಯ ಣಗಳಲ್ಲಿ ವರ್ಗಸಂಘರ್ಷದ ಹಿನ್ನೆಲೆಯಲ್ಲಿ ಮಾನವೀಯ ಸಂಬಂಧಗಳು ಬಿಚ್ಚಿ ಕೊಳ್ಳುತ್ತವೆ. ಬಂಡಾಯದಲ್ಲಿ ವರ್ಗ ಸಂಘರ್ಷವೇ ಕೃತಿಯ ಕೇಂದ್ರಬಿಂದುವಾಗಿದೆ. ಬಂಡಾಯ ಕಾದಂಬರಿ ಇವರ ಕೃತಿಗಳಲ್ಲಿ ವಿಶಿಷ್ಟವಾದುದು. ಇಲ್ಲಿ ಕಾರ್ಮಿಕ ಸಮಸ್ಯೆ ಕೇಂದ್ರಬಿಂದು. ಔದ್ಯೋಗೀಕೃತ ಸಮಾಜ ವ್ಯವಸ್ಥೆಯಲ್ಲಿಯ ಕಾರ್ಮಿಕ ಮಾಲಿಕ ಸಂಬಂಧ, ಸಂಘರ್ಷ, ವ್ಯವಸ್ಥೆಯನ್ನೇ ಬುಡಮೇಲು ಮಾಡಬೇಕೆನ್ನುವ ಬಂಡಾಯ ಪ್ರವೃತ್ತಿ, ಅಲ್ಲಿರುವ ಹಿಂಸೆ ಇವುಗಳ ಮೂಲಕ ವರ್ಗಸಂಘರ್ಷದ ಸ್ವರೂಪವನ್ನು ಕಾದಂಬರಿ ಕಂಡರಿಸುತ್ತದೆ. 

	ಕಾದಂಬರಿಗಳಂತೆಯೇ ಕಥೆಗಳಲ್ಲೂ ಇವರು ಮುಂಬಯಿ ನಗರದ ಮಧ್ಯಮವರ್ಗದ ಬದುಕನ್ನು ಚಿತ್ರಿಸಿದ್ದಾರೆ. ನವೋದಯ ಮಾರ್ಗದಲ್ಲಿ ತಮ್ಮ ಬರೆವಣಿಗೆಯನ್ನು ಆರಂಭಿಸಿದ ಇವರು ಅನಂತರದ ಪ್ರಗತಿಶೀಲ ಮತ್ತು ನವ್ಯ ಮಾರ್ಗಗಳಿಗೂ ಸ್ಪಂದಿಸುತ್ತಲೇ ಬಂದಿದ್ದಾರೆ. ಕನ್ನಡ ಸಣ್ಣಕಥೆಗಳಲ್ಲಿ ಕಾಣಿಸಿಕೊಂಡ ಅನೇಕ ಸ್ಥಿತ್ಯಂತರಗಳ ನಡುವೆಯೂ ಇವರು ತಮ್ಮ ಮೂಲಸಾಮಗ್ರಿಗಳಿಗೆ ಹೊಸದಾಗಿ ಬಂದ ಸಂಪ್ರದಾಯದ ಕೆಲವು ವೈಶಿಷ್ಟ್ಯಗಳನ್ನು ಮಾತ್ರ ಅಳವಡಿಸಿಕೊಂಡು, ಪೂರ್ತಿಯಾಗಿ ಬದಲಾಗದೆ ಸತ್ತ್ವವನ್ನು ಉಳಿಸಿಕೊಂಡ ಕೃತಿಯನ್ನು ನೀಡುತ್ತ ಬಂದಿದ್ದಾರೆ. ವಂಚನೆ, ಕ್ರೌರ್ಯ, ಸಾಂಸಾರಿಕ ಸಂಕಷ್ಟ ಪರಿಸ್ಥಿತಿಯ ಒತ್ತಡ, ಪ್ರೇಮ-ಹೀಗೆ ಬದುಕಿನ ಎಲ್ಲ ಸ್ತರಗಳೂ ಇವರ ಕಥೆಗಳಲ್ಲಿ ಕಾಣಸಿಗುತ್ತವೆ. ಇವರ ಕಥೆಗಳು ಕಥೆಗಳ ಅಂಶವನ್ನು ಬಿಟ್ಟುಕೊಡದೆ ಮನೋವಿಶ್ಲೇಷಣೆಯ ಮೂಲಕ ಬದುಕಿನ ನಿಗೂಢತೆಯನ್ನು ಕೆದಕುವ ಪ್ರಯತ್ನ ಮಾಡುತ್ತವೆ. ಹಾಗಾಗಿ ಆಧುನಿಕ ಬದುಕಿನ ದೃಷ್ಟಿಯಿಂದ ಇವರ ಕಥೆಗಳು ಅರ್ಥಪೂರ್ಣವೆನಿಸುತ್ತವೆ. 

	ಖುರ್ಷಿದ್‍ನಾರಿಮನ್ (1976) ಎಂಬಾತನ ಜೀವನ ಚರಿತ್ರೆ ಹಾಗೂ ನಾನೊಬ್ಬ ಭಾರತೀಯಪ್ರವಾಸಿ (1999) ಎಂಬ ಪ್ರವಾಸ ಪ್ರಬಂಧ ಕೂಡ ಇವರ ಬರೆವಣಿಗೆಗಳಾಗಿವೆ. ಇವುಗಳಲ್ಲದೆ ರಾಜಕಾರಣ, ಶಿಕ್ಷಣ, ಸಾಹಿತ್ಯ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನಾಡಿನ ಪತ್ರಿಕೆಗಳಲ್ಲಿ ಬರೆಯುತ್ತಲೇ ಬಂದಿದ್ದಾರೆ. ಇಬ್ಸನ್ ಹಾಗೂ ಬರ್ನಾರ್ಡ್ ಷಾ ಅವರ ಕೆಲವು ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. (ಮುಳ್ಳಲ್ಲಿದೆ ಮಂದಾರ, ಗಿಳಿಯು ಪಂಜರದೊಳಿಲ್ಲ) ಇವು ರಂಗಭೂಮಿಯ ಮೇಲೂ ಪ್ರಯೋಗಗೊಂಡು ಯಶಸ್ಸುಗಳಿಸಿವೆ. ಯಕ್ಷಗಾನ, ಕನ್ನಡ ಸಾಹಿತ್ಯ, ಜನಪದ ರಂಗಭೂಮಿ ಕುರಿತಂತೆ ಬರೆದ ಇವರ ಲೇಖನಗಳು ಇಲಸ್ಟ್ರೇಟೆಡ್ ವೀಕ್ಲಿ ಮತ್ತು ಭಾರತಜ್ಯೋತಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

	ಇವರು ಪತ್ರಿಕೋದ್ಯಮರಂಗದಲ್ಲಿಯೂ ಅನುಭವ ಉಳ್ಳವರು. ಮುಂಬಯಿಯಲ್ಲಿ ಪ್ರಕಟವಾಗುತ್ತಿದ್ದ ಕನ್ನಡ ಸಾಪ್ತಾಹಿಕ `ನುಡಿ ಪತ್ರಿಕೆಯ ಸಹ ಸಂಪಾದಕರಾಗಿ, ಅಂಕಣಕಾರರಾಗಿ ಕೆಲಸ ಮಾಡಿದ್ದಾರೆ (1947-50).

	ಇವರಿಗೆ ಅನೇಕ ಗೌರವ ಪ್ರಶಸ್ತಿಗಳು ಲಭ್ಯವಾಗಿವೆ. ಬೆಂಗಳೂರಿನಲ್ಲಿ ಕಥೆಗಾರ, ಕಾದಂಬರಿಕಾರರ ಸಮ್ಮೇಳನದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ಸಂಪಿಗೆ ಹೂ ಕೃತಿಗೆ ಬಹುಮಾನ(1952), ಅನುರಕ್ತೆ ಕಾದಂಬರಿಗೆ ಮೈಸೂರು ಸರ್ಕಾರದ ಪ್ರಥಮ ಬಹುಮಾನ(1957), ಕಾಡುಮಲ್ಲಿಗೆ ಕಥಾಸಂಗ್ರಹಕ್ಕೆ ದ್ವಿತೀಯ ಬಹುಮಾನ(1968), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ(1983), ಬಂಡಾಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1986) ದೊರೆತಿವೆ. 

	ವಾತ್ಸಲ್ಯಪಥ ಮತ್ತು ಅನುರಕ್ತೆ ಕಾದಂಬರಿಗಳು ಕನ್ನಡ ಚಲನಚಿತ್ರಗಳಾಗಿವೆ. ಇವರ ಕೆಲವು ಸಣ್ಣಕಥೆಗಳು ಇಂಗ್ಲಿಷ್, ಮರಾಠಿ, ಹಿಂದಿ, ಗುಜರಾತಿ, ಮಲಯಾಳ ಭಾಷೆಗಳಿಗೆ ಅನುವಾದಗೊಂಡಿವೆ; ಮುಂಬಯಿ ಆಕಾಶವಾಣಿಯಿಂದ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಪ್ರಸಾರಗೊಂಡಿವೆ.									
		(ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ